Return to BahaiPrayers.net
Facebook
. . . . ಮನುಷ್ಯರ ಮುಂದೆ ಉಲ್ಲಂಘನೆ ಮತ್ತು ಪಾಪಗಳ ನಿವೇದನೆಗೆ ಅನುಮತಿಯಿಲ್ಲ . . . . ಪಾಪಿಯು, ತನ್ನ ಮತ್ತು ದೇವರ ಮಧ್ಯೆ, ಕೃಪಾಸಾಗರದಿಂದ ಕೃಪೆಗಾಗಿ ಮೊರೆಯಿಡಬೇಕು, ಉದಾರತೆಯ ಸ್ವರ್ಗದಿಂದ ಕ್ಷಮೆಯಾಚಿಸಿ ಈ ರೀತಿ ಹೇಳಬೇಕು.
ಓ ದೇವರೇ, ನನ್ನ ದೇವರೇ! ಯಾರು ನಿನ್ನ ಮಧುರವಾಣಿಗಳಿಂದ ಅತೀ ಹರ್ಷಿತರಾಗಿ, ದಿವ್ಯ ಹುತಾತ್ಮತೆಯ ಭವ್ಯವಾದ ಉನ್ನತ ಸ್ಥಾನದೆಡೆ ಧಾವಿಸಿದರೋ ಅಂತಹ ನಿನ್ನ ನಿಜ ಪ್ರೇಮಿಗಳ ನೆತ್ತರಿನ ಮೂಲಕ ನಾನು ನಿನ್ನಲ್ಲಿ ಮೊರೆಯಿಡುತ್ತಿದ್ದೇನೆ. ನಿನ್ನ ಜ್ಞಾನದಲ್ಲಿ ಪ್ರತಿಷ್ಠೆಯಾಗಿರುವ ರಹಸ್ಯಗಳ ಮೂಲಕ ಹಾಗೂ ನಿನ್ನ ಉದಾರತೆಯ ಸಾಗರದಲ್ಲಡಗಿರುವ ಮುತ್ತುರತ್ನಗಳ ಮೂಲಕ ನನಗೂ ನನ್ನ ತಂದೆ ಮತ್ತು ನನ್ನ ತಾಯಿಗೂ ಕ್ಷಮೆಯನ್ನೀಡೆಂದು ನಾನು ನಿನ್ನನ್ನು ಯಾಚಿಸುತ್ತಿದ್ದೇನೆ. ಕೃಪೆಯನ್ನು ತೋರುವವರಲ್ಲಿ, ಸತ್ಯವಾಗಿಯೂ, ನೀನೇ ಅತ್ಯಂತ ದಯಾಳು ಆಗಿರುವೆ. ಸದಾ ಕ್ಷಮಾಶೀಲನೂ, ಸರ್ವ ಉದಾರಿಯೂ ಆದ ನೀನಲ್ಲದೆ ಬೇರೆ ದೇವರಿಲ್ಲ.
ಓ ಪ್ರಭುವೇ! ಪಾಪಗಳ ಈ ಸಾರವು ನಿನ್ನ ಕೃಪಾ ಸಾಗರದತ್ತ ತಿರುಗಿರುವುದನ್ನೂ, ಈ ದುರ್ಬಲನು ನಿನ್ನ ದಿವ್ಯ ಶಕ್ತಿಯ ರಾಜ್ಯವನ್ನರಸುವುದನ್ನೂ ಹಾಗೂ ಈ ಬಡ ಜೀವಿಯು ಸ್ವಯಂ ನಿನ್ನ ಐಶ್ವರ್ಯದ ದಿನ ನಕ್ಷತ್ರದೆಡೆ ವಾಲಿರುವುದನ್ನೂ ನೀನು ನೋಡುತ್ತಿರುವೆ. ಓ ಪ್ರಭುವೇ, ನಿನ್ನ ಕರುಣೆ ಮತ್ತು ನಿನ್ನ ಕೃಪೆಯಿಂದ ಅವನನ್ನು ನಿರಾಶೆಗೊಳಿಸದಿರು ಅಥವಾ ನಿನ್ನ ದಿನಗಳಲ್ಲಿ ನಿನ್ನ ಅನುಗ್ರಹಿತ ದಿವ್ಯ ದರ್ಶನಗಳಿಂದ ಅವನನ್ನು ಬಹಿಷ್ಕರಿಸದಿರು, ಅಲ್ಲದೆ ನಿನ್ನ ಸ್ವರ್ಗ ಹಾಗೂ ನಿನ್ನ ಪೃಥ್ವಿಯಲ್ಲಿ ವಾಸಿಸುತ್ತಿರುವ ಸರ್ವರಿಗೂ ನೀನು ವಿಶಾಲವಾಗಿ ತೆರೆದಿಟ್ಟಿರುವ ನಿನ್ನ ದ್ವಾರದಿಂದ ಅವನನ್ನು ಹೊರದೂಡದಿರು.
ಅಕಟಕಟಾ! ನನ್ನ ಪಾಪಗಳು ನಿನ್ನ ಪವಿತ್ರತೆಯ ಅಸ್ಥಾನವನ್ನು ಸಮೀಪಿಸುತ್ತಿರುವುದರಿಂದ ನನ್ನನ್ನು ತಡೆದಿವೆ ಹಾಗೂ ನನ್ನ ಅತಿಕ್ರಮ ಪ್ರವೇಶವು ನನ್ನನ್ನು ನಿನ್ನ ಭವ್ಯವಾದ ಪೂಜಾಸ್ಥಾನದಿಂದ ಬಹುದೂರವಿರುವಂತೆ ಮಾಡಿದೆ. ನಾನು ಮಾಡಬಾರದೆಂದು ನೀನು ನಿಷೇಧಿಸಿರುವುದನ್ನು ನಾನು ಮಾಡಿರುವೆ ಹಾಗೂ ನಾನು ಲಕ್ಷಿಸಬೇಕೆಂದು ನೀನು ವಿಧಾಯಕ ಮಾಡಿರುವುದನ್ನು ನಾನು ಅಲಕ್ಷಿಸಿರುವೆ. ನನ್ನನ್ನು ನಿನ್ನ ಬಳಿ ಸೆಳೆಯುವಂತೆ ಮಾಡುವುದನ್ನು ನಿನ್ನ ಉದಾರತೆಯ ಲೇಖನಿಯಿಂದ ನನಗೆ ಬರೆದಿಡಬೇಕೆಂದೂ, ನಿನ್ನ ಕ್ಷಮೆ ಮತ್ತು ಮನ್ನಿಸುವಿಕೆ ಹಾಗೂ ನನ್ನ ಮಧ್ಯೆ ನುಸುಳಿರುವ ನನ್ನ ಅತಿಕ್ರಮಣಗಳಿಂದ ನನ್ನನ್ನು ಶುದ್ಧಗೊಳಿಸೆಂದೂ ನಾಮಧೇಯಗಳ ಸಾರ್ವಭೌಮ ಪ್ರಭುವಿನ ಮೂಲಕ ನಾನು ನಿನ್ನನ್ನು ಪ್ರಾರ್ಥಿಸುವೆ.
ನಿಜವಾಗಿಯೂ ನೀನೇ ಸಮರ್ಥ, ಉದಾರಿ, ಪ್ರಬಲನೂ, ಕೃಪಾಳುವೂ ಆದ ನೀನಲ್ಲದೆ ಬೇರೆ ದೇವರಿಲ್ಲ.
- Bahá'u'lláh