Return to BahaiPrayers.net
Facebook
ಯಾರ ನಾಮಗಳ ಮೂಲಕ ರೋಗಿಗಳು ಗುಣಮುಖರಾಗುವರೋ, ಅಸ್ವಸ್ಥರು ವಾಸಿಗೊಳ್ಳುವರೋ, ಬಾಯಾರಿದವರು ದಾಹವನ್ನು ತಣಿಸುವ ಪಾನೀಯ ಪಡೆಯುವರೋ, ದುಃಖಪೀಡಿತರು ಶಾಂತರಾಗುವರೋ, ಚಪಲಚಿತ್ತರು ಮಾರ್ಗದರ್ಶಿತರಾಗುವರೋ, ಕಡೆಗಣಿಸಲ್ಪಟ್ಟವರು ಉನ್ನತಿಗೇರುವರೋ, ಬಡವರು ಸಿರಿವಂತರಾಗುವರೋ, ಅಜ್ಞಾನಿಗಳು ಜ್ಞಾನಿಗಳಾಗುವರೋ, ಅಂಧಕಾರದಲ್ಲಿರುವವರು ಪ್ರಕಾಶಿತರಾಗುವರೋ, ಶೋಕತಪ್ತರು ಪ್ರಸನ್ನರಾಗುವರೋ, ನಿರಾತ್ಸಾಹಿಗಳು ಉತ್ಸಾಹಿತರಾಗುವರೋ, ತುಳಿಯಲ್ಪಟ್ಟವರು ಮೇಲೆತ್ತಲ್ಪಡುವರೋ, ಅವನೇ ನೀನಾಗಿರುವೆ, ಓ ಪರಮಾತ್ಮ. ನಿನ್ನ ಹೆಸರಿನ ಮೂಲಕ, ಓ ನನ್ನ ದೇವರೇ, ಸೃಷ್ಟಿಸಿದ ಎಲ್ಲವೂ ಹುರಿದುಂಬಿಸಲ್ಪಟ್ಟಿವೆ, ಸ್ವರ್ಗಗಳು ವ್ಯಾಪಿಸಿವೆ, ಭೂಮಿಯು ಸ್ಥಾಪಿತವಾಗಿದೆ. ಮೇಘಗಳನ್ನೆಬ್ಬಿಸಿ ಭೂಮಿಯ ಮೇಲೆ ಅವು ಮಳೆ ಸುರಿಸುವಂತೆ ಮಾಡಿದೆ. ನಿಶ್ಚಯವಾಗಿಯೂ ಇದು ನಿನ್ನ ಜೀವಿಗಳಿಗೆ ನಿನ್ನ ಕುರುಹಾಗಿದೆ.
ಯಾರ ನಾಮದ ಮೂಲಕ ನೀನು ನಿನ್ನ ದೈವತ್ವವನ್ನು ಪ್ರಕಟಪಡಿಸಿರುವೆಯೋ, ಸೃಷ್ಟಿಯಲ್ಲಿರುವುದಕ್ಕಿಂತ ಮಿಗಿಲಾಗಿ ನಿನ್ನ ಧರ್ಮವನ್ನು ಉನ್ನತಿಗೇರಿಸಿರುವೆಯೋ ಹಾಗೂ ನಿನ್ನ ಪ್ರತಿಯೊಂದೂ ಅತ್ಯಂತ ಶ್ರೇಷ್ಠ ಬಿರುದುಗಳಿಂದ ಅತೀ ಮಹಿಮಾನ್ವಿತ ಗುಣಧರ್ಮಗಳಿಂದ, ಮತ್ತೆಲ್ಲಾ ಸದ್ಗುಣಗಳಿಂದ ನಿನ್ನ ಉತ್ಕೃಷ್ಟ ಹಾಗೂ ಅತ್ಯಂತ ಶ್ರೇಷ್ಠವಾದ ಅಸ್ತಿತ್ವವು ಶ್ಲಾಘಿಸಲ್ಪಟ್ಟಿದೆಯೋ, ಆದ್ದರಿಂದ ನಿನ್ನ ಸೃಷ್ಟಿಯ ಸಾಮ್ರಾಜ್ಯದಲ್ಲಿ ನಿನ್ನ ಸಕಲ ವೈಭವದ ಆತ್ಮದೊಡನೆ ನೀನು ಸಂಬಂಧಿಸಿರುವ ಈ ಹಸುಳೆಯ ಮೇಲೆ ಈ ರಾತ್ರಿ ನಿನ್ನ ದಯೆಯ ಮೋಡಗಳಿಂದ ನಿನ್ನ ಉಪಶಮನವನ್ನು ವರ್ಷಿಸೆಂದು ನಾನು ನಿನ್ನಲ್ಲಿ ಮೊರೆಯಿಡುತ್ತಿದ್ದೇನೆ. ಆನಂತರ, ನಿನ್ನ ಅನುಗ್ರಹ, ಸುಸ್ಥಿತಿ ಹಾಗೂ ಆರೋಗ್ಯದ ನಿಲುವಂಗಿಯನ್ನು ಅವನಿಗೆ ತೊಡಿಸು. ಓ ನನ್ನ ಪ್ರಿಯತಮನೇ, ಪ್ರತಿಯೊಂದು ಬೇನೆ ಮತ್ತು ವ್ಯಾಧಿಯಿಂದ ಹಾಗೂ ನಿನಗೆ ಅಪ್ರಿಯವಾದವುಗಳಿಂದ ಅವನನ್ನು ಕಾಪಾಡು. ನಿಜವಾಗಿಯೂ ನಿನ್ನ ಪರಾಕ್ರಮವು ಎಲ್ಲಾ ವಸ್ತುಗಳಿಗೂ ಸಮಬಲವುಳ್ಳದ್ದಾಗಿದೆ. ಸತ್ಯವಾಗಿಯೂ ನೀನು ಅತ್ಯಂತ ಶಕ್ತಿಶಾಲಿ, ಸ್ವಯಮಾಧಾರನು. ಅದೂ ಅಲ್ಲದೆ, ಓ ನನ್ನ ಪರಮಾತ್ಮನೇ, ಅವನ ಮೇಲೆ ಈ ಜಗತ್ತಿನ ಹಾಗೂ ಮುಂದಿನದರ ಒಳಿತನ್ನೂ ಅಲ್ಲದೆ ಹಿಂದಿನ ಮತ್ತು ನಂತರದ ತಲೆಮಾರುಗಳ ಒಳಿತನ್ನೂ ಕಳುಹಿಸಿಕೊಡು. ನಿನ್ನ ಬಲ ಮತ್ತು ವಿವೇಕ ನಿಜವಾಗಿಯೂ ಇದಕ್ಕೆ ಸರಿಸಮವಾಗಿರುವುದು.
- Bahá'u'lláh