Return to BahaiPrayers.net
Facebook
ಓ ದೈವೀ ಅನುಗ್ರಹವೇ! ಈ ಸಭೆಯು ನಿನ್ನ ಸೌಂದರ್ಯದತ್ತ ಆಕರ್ಷಿತರಾಗಿರುವ ಹಾಗೂ ನಿನ್ನ ಪ್ರೀತಿಯ ಅಗ್ನಿಯಿಂದ ಜಾಜ್ವಲ್ಯಮಾನರಾಗಿರುವ ನಿನ್ನ ಮಿತ್ರರಿಂದ ತುಂಬಿಕೊಂಡಿದೆ. ಈ ಆತ್ಮಗಳನ್ನು ಸ್ವರ್ಗೀಯ ದೇವತೆಗಳನ್ನಾಗಿ ರೂಪಿಸು. ನಿನ್ನ ಪವಿತ್ರಾತ್ಮದ ಉಸಿರಿನ ಮೂಲಕ ಅವರನ್ನು ಪುನರ್ಜೀವಿತಗೊಳಿಸು, ಅವರಿಗೆ ವಾಕ್ ಚತುರತೆಯನ್ನೂ, ದೃಢಸಂಕಲ್ಪದ ಹೃದಯಗಳನ್ನೂ ದಯಪಾಲಿಸು, ಸ್ವರ್ಗೀಯ ಶಕ್ತಿ ಹಾಗೂ ಅಪಾರ ಕರುಣೆಯನ್ನು ಅವರಿಗೆ ಅನುಗ್ರಹಿಸು. ಅವರನ್ನು ಮಾನವ ಜನಾಂಗದ ಏಕತೆಯ ಪ್ರಚಾರಕರಾಗುವಂತೆ ಮಾಡು ಹಾಗೂ ಅವರು ಮಾನವತೆಯ ಲೋಕದಲ್ಲಿ ಪ್ರೀತಿ ಮತ್ತು ಮೈತ್ರಿಯ ಕಾರಣರಾಗುವಂತೆ ಮಾಡು, ಇದರಿಂದ ಆಪತ್ಕಾರಿ ಕತ್ತಲೆಯಾದ ತಿಳಿಗೇಡಿ ಪೂರ್ವಾಗ್ರಹಗಳು, ಸತ್ಯಸೂರ್ಯನ ಬೆಳಕಿನ ಮೂಲಕ ಮಾಯವಾಗಬಹುದು, ಈ ಮಂಕುಕವಿದ ಪ್ರಪಂಚವು ಪ್ರಕಾಶಿತಗೊಳ್ಳಬಹುದು, ಈ ಭೌತಿಕ ಪ್ರಪಂಚವು ಆತ್ಮ ಪ್ರಪಂಚದ ಕಿರಣಗಳನ್ನು ಪಡೆಯುವಂತಾಗಬಹುದು, ಈ ವಿವಿಧ ವರ್ಣಗಳು ಒಂದಾಗಿ ಒಂದೇ ಬಣ್ಣವಾಗಬಹುದು, ಹಾಗೂ ಸ್ತೋತ್ರದ ಸುಮಧುರ ಸ್ವರವು ನಿನ್ನ ಪವಿತ್ರತೆಯ ಸಾಮ್ರಾಜ್ಯಕ್ಕೇರಬಹುದು. ನಿಜವಾಗಿಯೂ, ನೀನು ಸರ್ವಶಕ್ತನೂ, ಸರ್ವಸಮರ್ಥನೂ ಆಗಿರುವೆ!
- `Abdu'l-Bahá