Return to BahaiPrayers.net
Facebook
ಓ ನನ್ನ ಪ್ರಭುವೇ, ಜನರು ನೋವು, ಅಪತ್ತುಗಳಿಂದ, ಕಷ್ಟ, ನಿಷ್ಠುರಗಳಿಂಡ ಅವರಿಸಲ್ಪಟ್ಟಿರುವರೆಂದು ನೀನು ಅರಿತಿರುವೆ. ಮಾನವನ ಒಂದೊಂದು ಕಷ್ಟವೂ ಅವನನ್ನು ಹಿಂಸಿಸುವುದು. ಅವನ ಒಂದೊಂದು ದುಃಸ್ಥಿತಿಯೂ ಅವನನ್ನು ಸರ್ಪ ಕಚ್ಚಿದಂತೆಯೇ ಸರಿ. ಇದನ್ನು ಕೂಡ ನೀನು ತಿಳಿದಿರುವಿ. ನೀನು ನೀಡುವ ಸಂರಕ್ಷಣೆ, ಭದ್ರತೆ, ಕಾಯುವಿಕೆ ಮತ್ತು ಕಾಪಾಡುವಿಕೆ ಇವುಗಳ ಹೊರತಾಗಿ ಅವನಿಗೆ ಬೇರೆ ಯಾವ ರಕ್ಷಣೆ ಹಾಗೂ ಆಶ್ರಯವಿಲ್ಲ.
ಓ ದಯಾಳು, ಓ ನನ್ನ ಸ್ವಾಮಿಯೇ, ನಿನ್ನ ಸಂರಕ್ಷಣೆಯೇ ನನ್ನ ಅಸ್ತ್ರಶಸ್ತ್ರಗಳ ಬತ್ತಳಿಕೆಯಾಗಿರಲಿ. ನಿನ್ನ ಜೋಪಾನ ತನವೇ ನನ್ನ ಗುರಾಣಿಯಾಗಿರಲಿ. ನಿನ್ನ ಏಕೀಭಾವದ ಮೂರ್ತಿಯೇ ಹಾಗೂ ಅದರ ದ್ವಾರದಲ್ಲಿ ಕಾಣಿಸಿಕೊಳ್ಳುವ ನಮ್ರತೆಯೇ ನನಗೆ ಬೆಂಗಾವಲಾಗಿರಲಿ. ನಿನ್ನ ವಶತ್ವ ಮತ್ತು ರಕ್ಷಣೆ ನನ್ನ ಕೋಟೆ ಹಾಗೂ ನಿವಾಸಸ್ಥಾನವಾಗಿರಲಿ. ನನ್ನನ್ನು ಅಹಂ ಮತ್ತು ಆಕಾಂಕ್ಷೆಗಳಿಂದ ರಕ್ಷಿಸು. ಎಲ್ಲ ರೋಗರುಜಿನಗಳಿಂದ, ಪರೀಕ್ಷೆಯಿಂದ ಮತ್ತು ಕಷ್ಟಗಳಿಂದ ನನ್ನನ್ನು ಪಾರುಗಾಣಿಸು.
ಸತ್ಯವಾಗಿಯೂ ನೀನು ರಕ್ಷಕ, ಪೋಷಕ, ಕಾಪಾಡತಕ್ಕವ, ಸಂತೃಪ್ತಿದಾತ, ಅಷ್ಟೇ ಅಲ್ಲ. ಕರುಣಾಳುಗಳಲ್ಲಿ ಕರುಣಾಳು.
- `Abdu'l-Bahá